ಇಂಡಿ: ನಲಿ-ಕಲಿ ಪದ್ದತಿಯು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಜಾರಿಗೆ ತಂದಿರುವ ವಿಶೇಷ ಕಲಿಕಾ ಪ್ರಕ್ರಿಯೆಯಾಗಿದೆ. ಈ ಪದ್ಧತಿ ಶಿಶು ಕೇಂದ್ರಿತ, ಚಟುವಟಿಕೆ ಆಧಾರಿತವಾಗಿ ಮಗುವಿಗೆ ಶಾಲಾ ಶಿಕ್ಷಣದೊಂದಿಗೆ ಜೀವನಕ್ಕೆ ಬೇಕಾದ ವಿವಿಧ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಹಿರೇರೂಗಿ ಯುಬಿಎಸ್ ಶಾಲಾ ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರ ತಾಲೂಕಿನ ಲಿಂಗದಳ್ಳಿ ಗ್ರಾಮದ ಎಚ್ ಪಿ ಎಸ್ ಶಾಲೆಯಲ್ಲಿ ಹಮ್ಮಿಕೊಂಡ ನಿಂಬಾಳ ಕೆ ಡಿ ಕ್ಲಸ್ಟರ್ ಮಟ್ಟದ ನಲಿಕಲಿ ಶಿಕ್ಷಕರ ಸಮಾಲೋಚನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಯು ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಕೆಯನ್ನು ಆರಂಭಿಸಿ, ಗೆಳೆಯರ ಸಹಕಾರದಲ್ಲಿ ಪುನರ್ಬಲನಗೊಂಡು, ನಾಯಕತ್ವ ಗುಣ ಬೆಳೆಸಿಕೊಳ್ಳುತ್ತಾ, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ರೂಢಿಸಿಕೊಳ್ಳುತ್ತದೆ ಎಂದು ಹೇಳಿದರು.
ನಿಂಬಾಳ ಕ್ಲಸ್ಟರ್ ಸಿ ಆರ್ ಪಿ ಮಲ್ಲಿಕಾರ್ಜುನ ಹಡಲಸಂಗ ಮಾತನಾಡಿ, ನಲಿ-ಕಲಿ ತರಗತಿಯ ಕೊಠಡಿಯು ವಿಭಿನ್ನತೆಯಿಂದ ಕೂಡಿದೆ. ಕಲಿಕಾ ಸಾಮಗ್ರಿಯನ್ನು ವ್ಯವಸ್ಥಿತವಾಗಿ ಜೋಡಿಸಿ ಪೂರ್ವ ಸಿದ್ಧತೆಯೊಂದಿಗೆ ವಿದ್ಯಾರ್ಥಿಗಳಿಗೆ ಆಕರ್ಷಕ ರೀತಿಯಲ್ಲಿ ಬೋಧನೆ ಮಾಡಲಾಗುತ್ತದೆ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಸುರೇಶ ಅಂಕಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತರಗತಿಯಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಕಲಿಕೋಪಕರಣಗಳ ಮೂಲಕ ಕಲಿಯುವ ಸಲುವಾಗಿ ಕಲಿಕಾ ಕಾರ್ಡುಗಳು, ಪ್ರಗತಿ ನೋಟಗಳು, ಗುಂಪು ರಚನಾ ತಟ್ಟೆಗಳು, ಕಲಿಕಾ ಚಪ್ಪರ, ವಾಲ್ ಪ್ಲೇಟ್, ಹವಾಮಾನ ನಕ್ಷೆ, ಅಭ್ಯಾಸ ಪುಸ್ತಕಗಳಂತಹ ವಿಧಾನಗಳನ್ನು ತರಗತಿಯಲ್ಲಿ ಅಳವಡಿಸಿದ್ದು, ಈ ಪದ್ಧತಿಯ ಗಮನಾರ್ಹ ಅಂಶವಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಆರ್ ಎಲ್ ಚವ್ಹಾಣ, ಎಸ್ ಜಿ ತೇಲಿ, ವೈ ಎಚ್ ಜಾಧವ ಅವರು ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ನಲಿಕಲಿ ಶಿಕ್ಷಕರು ಉಪಸ್ಥಿತರಿದ್ದರು.
Post a Comment