Clickable Image

Friday, July 5, 2024

ಕಾಶಿ ಮಾದರಿಯಲ್ಲಿ ದೇವಲ ಗಾಣಗಾಪುರ ಸುಕ್ಷೇತ್ರ ಅಭಿವೃದ್ಧಿ ಮಾಡುತ್ತೇವೆ! ರುದ್ರಪ್ಪ ಲಮಾಣಿ, ದೇವಸ್ಥಾನದ ಅಭಿವೃದ್ಧಿಗೆ ಎರಡು ನೂರು ಕೋಟಿ ನೀಲಿ ನಕ್ಷೆ ತಯಾರಿ.

 


ಕಲಬುರಗಿ,ಜು.3(ಕ.ವಾ) ಜಿಲ್ಲೆಯ ಅಫಜಲಪೂರ ತಾಲೂಕಿನ ದತ್ತನ ಸುಕ್ಷೇತ್ರವಾದ ದೇವಲ ಗಾಣಗಾಪೂರಕ್ಕೆ ಕರ್ನಾಟಕವಲ್ಲದೆ ಪಕ್ಕದ ಆಂಧ್ರ ಪ್ರದೇಶ, ತೆಲಂಗಾಣಾ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಂದ ಅಗಮಿಸುವ ಭಕ್ತಾದಿಗಳ ಸಂಖ್ಯೆ ಹೆಚ್ಚಿರುವ ಕಾರಣ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ಕಾಶಿ ಮಾದರಿಯಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು ಎಂದು ಕರ್ನಾಟಕ‌ ವಿಧಾನಸಭೆ ಉಪಾಧ್ಯಕ್ಷರು ಮತ್ತು ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮಿತಿಯ ಅಧ್ಯಕ್ಷರಾಗಿರುವ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.


ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೇವಲ ಗಾಣಗಾಪೂರ ದೇವಸ್ಥಾನ ಅಭಿವೃದ್ಧಿ ಕುರಿತಂತೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನ ಅಭಿವೃದ್ಧಿಗೆ ಕಲಬುರಗಿ ಜಿಲ್ಲಾಡಳಿತವು ಈಗಾಗಲೆ 83.52 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಗೆ "ಪ್ರಸಾದ" ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿರುವುದರಿಂದ ಸಮಿತಿ ಸದಸ್ಯೆ ಶಿವರಾಂ ಹೆಬ್ಬಾರ ಅವರ ಸಲಹೆಯಂತೆ ಕೇಂದ್ರ ಸರ್ಕಾರದ ಬಳಿ ಸಮಿತಿಯ ನಿಯೋಗ ತೆರಳಿ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.


ದತ್ತನ ಕ್ಷೇತ್ರಕ್ಕೆ ಲಕ್ಷಾಂತರ ಜನ ಬರುವುದರಿಂದ ಸ್ವಚ್ಛತೆ ಮತ್ತು ನೈರ್ಮಲ್ಯ ತಡೆಯುವ‌ ನಿಟ್ಟಿನಲ್ಲಿ ಒಳಚರಂಡಿ ನಿರ್ಮಾಣ‌ ಮಾಡಬೇಕು, ನದಿ‌ ಮಾಲಿನ್ಯ ತಡೆಯಬೇಕು, ಅತಿಕ್ರಮಣ ತೆರವುಗೊಳಿಸಬೇಕು ಎಂದು ಸಮಿತಿ ಸದ್ಯಸ್ಯ ಎಸ್.ಸುರೇಶ ಕುಮಾರ ಅಭಿಪ್ರಾಯಪಟ್ಟರು. ಇದಕ್ಕೆ ಸಹಮತಿ ವ್ಯಕ್ತಪಡಿಸಿದ ಸಮಿತಿ ಅಧ್ಯಕ್ಷ ರುದ್ರಪ್ಪ ಲಮಾಣಿ ಅವರು, ಒಳಚರಂಡಿ ನಿರ್ಮಾಣ ಆದ್ಯತೆ ಮೇಲೆ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಸದಸ್ಯ ಎಸ್.ಸುರೇಶಕುಮಾರ ಮಾತು ಮುಂದುವರೆಸಿ, ಹಣ ನೀಡಿದರೆ ಮಧ್ಯವರ್ತಿಗಳು ಬೇಗ ದರ್ಶನ ಕೊಡಿಸ್ತಾರಂತೆ, ಇದಕ್ಕೆ ಕಡಿವಾಣ ಹಾಕಲು ಏನು ಕ್ರಮ ಕೈಗೊಂಡೀರಿ ಎಂದು ದೆವಸ್ತಾನ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ಅವರನ್ನು ಪ್ರಶ್ನಿಸಿದರು. ಭದ್ರತಾ ಸಿಬ್ಬಂದಿ ಹೆಚ್ಚಿಗೆ ನಿಯೋಜಿಸಲು ಕ್ರಮ ವಹಿಸಲಾಗಿದೆ ಎಂದು ಶಿವಕಾಂತಮ್ಮ ಉತ್ತರಿಸಿದರು.


ಸಮಿತಿ ಸದಸ್ಯರಾದ ಅರಬೈಲ್ ಶಿವರಾಂ ಹೆಬ್ಬಾರ್, ಸುರೇಶಬಾಬು ಸಿ.ಬಿ., ಎಸ್.ಟಿ.ಸೋಮಶೇಖರ, ಎ.ಸಿ.ಶ್ರೀನಿವಾಸ ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ ಅವರು ಚರ್ಚೆಯಲ್ಲಿ ಭಾಗವಹಿಸಿ ದತ್ತನ ದರ್ಶನಕ್ಕೆ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ತಂದು ಜನಸಂದಣಿ ತಡೆಯಬಹುದು. ದಾನಿಗಳ‌ ನೆರವಿನಿಂದ ಅಥವಾ ಪ್ರವಾಸೋದ್ಯಮ ಇಲಾಖೆಯಿಂದ ಧಾರ್ಮಿಕ ಕ್ಷೇತ್ರ ಅಭಿವೃದ್ಧಿಪಡಿಸಬಹುದು‌. ದತ್ತನ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು ಎಂದು ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು.


ಸಭೆಯಲ್ಲಿ ಭಾಗವಹಿಸಿದ ಅಫಜಲಪೂರ ಶಾಸಕ‌ ಎಂ.ವೈ.ಪಾಟೀಲ ಮಾತನಾಡಿ ದತ್ತನ ಕ್ಷೇತ್ರಕ್ಕೆ ಲಕ್ಷಾಂತರ ಜನ ದೇಶದ‌ ವಿವಿಧ ರಾಜ್ಯಗಳಿಂದ ಬರುತ್ತಾರೆ.‌ ವಿಶೇಷವಾಗಿ ದತ್ತನ‌ ಜಯಂತಿಯಂದು ಜನಸಾಗರದಂತೆ ಭಕ್ತಾದಿಗಳು ಇಲ್ಲಿಗೆ ಹರಿದುಬರುವುದರಿಂದ ಇಲ್ಲಿನ ವ್ಯವಸ್ಥೆ ಕಂಡು ಅಧಿಕಾರಿ-ಜನಪ್ರತಿನಿಧಿ ಮೇಲೆ ಹಿಡಿಶಾಪ ಹಾಕುತ್ತಾರೆ. ಹೀಗಾಗಿ ಇಲ್ಲಿ ರಸ್ತೆ, ವಾಹನ ಪಾರ್ಕಿಂಗ್ ವ್ಯವಸ್ಥೆ ಮೊದಲಾದ್ಯತೆ ಮೇಲೆ ಸರಿಪಡಿಸಬೇಕಿದೆ. ದತ್ತನ ಕ್ಷೇತ್ರಕ್ಕೆ ನಿರು ಪೂರೈಸುವ ಬ್ಯಾರೇಜಿನಲ್ಲಿ ಸೋರಿಕೆ ತಡೆದು ಪುನರ್ ನವೀಕರಣ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕಿದೆ. ಭದ್ರತೆ ದೃಷ್ಠಿಯಿಂದ ಪೊಲೀಸ್ ಠಾಣೆ ಇಲ್ಲಿ ಸ್ಥಾಪನೆಯಾಗಬೇಕು. ಭಕ್ತಾದಿಗಳು ಉಳಿದುಕೊಳ್ಳಲು ಸರ್ಕಾರಿ ಯಾತ್ರಿಕ ನಿವಾಸ ನಿರ್ಮಾಣವಾಗಬೇಕು. ಈಗಾಗಲೆ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣದ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದರು.


ಅಲ್ಲದೆ ಅಕ್ಕಪಕ್ಕದ ರಾಜ್ಯಗಳ ಮಂತ್ರಿಗಳು, ಗಣ್ಯರು ಆಗಾಗ ಬಂದು ದತ್ತನ ದರ್ಶನ ಪಡೆದುಕೊಳ್ಳುತ್ತಾರೆ. ಇತ್ತೀಚೆಗೆ ಕೇಂದ್ರ‌ ರಾಷ್ಟ್ರೀಯ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಸಹ ಆಗಮಿಸಿದ್ದರು. ಹೀಗಾಗಿ ಗಣ್ಯರ ಅನುಕೂಲಕ್ಕೆ ಇಲ್ಲಿ ಹೆಲಿಪೋರ್ಟ್ ಸ್ಥಾಪಿಸುವುದು ಅವಶ್ಯಕವಾಗಿದೆ ಎಂದು ಎಂ.ವೈ.ಪಾಟೀಲ ತಿಳಿಸಿದರು.


ಇದಕ್ಕೂ ಮುನ್ನ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಗಾಣಗಾಪುರ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ 200 ಕೋಟಿ ರೂ. ವೆಚ್ಚದ ನೀಲಿ ನಕ್ಷೆ ಸಿದ್ಧಪಡಿಸಿದೆ. ಕೇಂದ್ರ ಸರ್ಕಾರದ "ಪ್ರಸಾದ" ಯೋಜನೆಯಡಿ ದತ್ತಾತ್ರೇಯನ ಕ್ಷೇತ್ರದಲ್ಲಿ ದೇವಸ್ಥಾನ ಆವರಣ, ಸಂಗಮ ಮತ್ತು ಅಷ್ಟ ತೀರ್ಥ ಸ್ಥಳಗಳ ಸಮಗ್ರ ಅಭಿವೃದ್ಧಿಗೆ 83.52 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ. ಇನ್ನು ದೇವಸ್ಥಾನದಲ್ಲಿ

ಕಳೆದ‌ 2014-15 ರಿಂದ 2023-24ರ ವರೆಗೆ ದೇವಸ್ಥಾನಕ್ಕೆ ಬಂದ 3.96 ಕೋಟಿ ರೂ. ಆದಾಯದಲ್ಲಿ ಮೂಲಸೌಕರ್ಯ, ಸಿಬ್ಬಂದಿ ವೇತನಕ್ಕಾಗಿ 1.98 ಕೋಟಿ ರೂ. ಖರ್ಚು ಮಾಡಿದೆ. 2016-17 ರಿಂದ ಇಲ್ಲಿಯವರೆಗೆ ಗಾಣಗಾಪುರದಲ್ಲಿ ಸಿ.ಸಿ.ರಸ್ತೆ, ಯಾತ್ರಿಕ ನಿವಾಸ, ಪಾರ್ಕಿಂಗ್, ಸಿ.ಸಿ.ಡ್ರೇನ್ ಹೀಗೆ ಸುಮಾರು 24 ಮೂಲಸೌಕರ್ಯ ಕಾಮಗಾರಿಗಳಿಗೆ 1.62 ಕೋಟಿ ರೂ. ಖರ್ಚು‌ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಶೂನ್ಯ ಅರ್ಕಿಟೆಕ್ಟ್ ಸಂಸ್ಥೆಯ‌ ಮಲ್ಯಾ ಅವರು ದೇವಸ್ಥಾನ ಅಭಿವೃದ್ಧಿ ಸಿದ್ಧಪಡಿಸಿರುವ ಮಾಸ್ಟರ್ ಪ್ಲ್ಯಾನ್ ಪ್ತಾತ್ಯಕ್ಷಿಕೆ‌ ಮೂಲಕ ಸಮಿತಿಗೆ ಯೋಜನೆಯ ವಿವರವನ್ನು ಹಾಜರುಪಡಿಸಿದರು.


ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಬಸವರಾಜೇಂದ್ರ‌ ಹೆಚ್., ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ, ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಅಫಜಲಪುರ ತಹಶೀಲ್ದಾರ ಸಂಜೀವಕುಮಾರ ದಾಸರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.


Post a Comment

Whatsapp Button works on Mobile Device only