ರಾಯಚೂರು:ದೇವದುರ್ಗ ತಾಲೂಕಿನ ಎನ್ ಗಣೇಕಲ್ ಗ್ರಾಮದಿಂದ ನೀಲಗಲ್ ಗ್ರಾಮದವರೆಗೆ ಕೈಗೊಂಡಿರುವ ಒಂದೇ ರಸ್ತೆ ಕಾಮಗಾರಿಗೆ ಎರಡು ಬಾರಿ ಭೂಮಿಪೂಜೆ ನೆರೆವೇರಿಸಿ ಕಾಮಗಾರಿ ಪ್ರಾರಂಭಿಸಿದ್ದೇವೆಂದು ಹಣ ಲೂಟಿ ಹೊಡೆಯುವ ಹುನ್ನಾರ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದರು.2017-18ನೇ ಸಾಲಿನಲ್ಲಿ ರಸ್ತೆ ಕಾಮಗಾರಿಗೆ ಒಟ್ಟು ₹70 ಲಕ್ಷ ಬಿಡುಗಡೆಯಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳಿಸದೆ ಕಳಪೆ ನಡೆಸಿ ಅರ್ಧಕ್ಕೆ ಬಿಟ್ಟಿದ್ದರು. ಬಳಿಕ ಅದೇ ರಸ್ತೆ ಕಾಮಗಾರಿಗೆ ಎರಡನೇ ಬಾರಿಗೆ ₹3.10 ಕೋಟಿ ಅನುದಾನ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾಗಿದೆ. ಹೀಗೆ ಒಂದೇ ರಸ್ತೆಗೆ ಎರಡು ಬಾರಿ ಕೋಟ್ಯಂತರ ರೂಪಾಯಿ ಹಣ ಬಿಡುಗಡೆಯಾದರೂ ಗುಣಮಟ್ಟದ ರಸ್ತೆ ನಿರ್ಮಿಸದೇ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡು ಕಳಪೆ ಕಾಮಗಾರಿ ಕೈಗೊಂಡು ಹಣ ಲೂಟಿ ಹೊಡೆದಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದರು.
“ಇದೀಗ 2024-25ನೇ ಸಾಲಿನಲ್ಲಿ ಮತ್ತೆ ಎನ್ ಗಣೇಕಲ್‌ನಿಂದ ನೀಲಗಲ್ ಗ್ರಾಮದವರೆಗಿನ ರಸ್ತೆ ಕಾಮಗಾರಿಗೆ ₹1 ಕೋಟಿ ಮಂಜೂರಾಗಿದೆ. ಒಂದೇ ರಸ್ತೆ ಕಾಮಗಾರಿಗೆ ಮೂರು ಬಾರಿ ಹಣ ಮಂಜೂರು ಮಾಡುತ್ತಿರುವುದು ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಮೀಲಾಗಿ ರಸ್ತೆ ಹೆಸರಿನಲ್ಲಿ ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡುತ್ತಿದ್ದಾರೆ” ಎಂದು ಗ್ರಾಮಸ್ಥರು ಹಿಡಿಶಾಪ ಹಾಕಿದರು.ಸ್ಥಳೀಯ ನಿವಾಸಿ ಶಾಂತಕುಮಾರ್ ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿ ಜೊತೆ ಮಾತನಾಡಿ, “ರಸ್ತೆ ಕಾಮಗಾರಿಗೆ ಒಮ್ಮೆ ಮಂಜೂರಾದ ಹಣ ದುರ್ಬಳಕೆ ಮಾಡಿಕೊಂಡು ಗುಣಮಟ್ಟದ ರಸ್ತೆ ನಿರ್ಮಿಸದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅದೇ ರಸ್ತೆ ಅಭಿವೃದ್ಧಿಗೆ ಮತ್ತೆ ಹಣ ಮಂಜೂರು ಮಾಡಿರುವುದನ್ನು ರದ್ದುಪಡಿಸಬೇಕು. ಈ ಅವ್ಯವಹಾರದಲ್ಲಿ ಶಾಮೀಲಾದ ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು
Post a Comment