ಕಲಬುರಗಿ,ಆ.13(ಕ.ವಾ) ಪ್ರಸಕ್ತ ಆಯವ್ಯಯದಲ್ಲಿ ಕಲಬುರಗಿ, ಕೊಪ್ಪಳದ ತಳಕಲ್ ಹಾಗೂ ಮೈಸೂರಿನ ವರುಣಾದಲ್ಲಿ ಮಲ್ಟಿ ಸ್ಕಿಲ್ ಡೆವಲೆಪಮೆಂಟ್ ಸೆಂಟರ್ ಸ್ಥಾಪನೆಗೆ ಘೋಷಣೆಯಾಗಿದ್ದು, ಕಲಬುರಗಿಯಲ್ಲಿ ಮೂಲಸೌಕರ್ಯ ಲಭ್ಯ ಇರುವುದರಿಂದ ತಾತ್ಕಲಿಕವಾಗಿ ಶೀಘ್ರ ಸೆಂಟರ್ ಆರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಇ.ವಿ.ರಮಣರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಇಲ್ಲಿನ ಗುಲಬರ್ಗಾ ವಿ.ವಿ.ಗೆ ಭೇಟಿ ನೀಡಿ ಸ್ಕಿಲ್ ಡೆವಲೆಪಮೆಂಟ್ ಸೆಂಟರ್ ಸ್ಥಾಪನೆಗೆ ಜಮೀನು ವೀಕ್ಷಿಸಿದ ನಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿ.ಸಿ., ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಕೌಶಲ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸೆಂಟರ್ ಸ್ಥಾಪನೆಗೆ ಗುಲಬರ್ಗಾ ವಿ.ವಿ. ಆವರಣದಲ್ಲಿ ಜಮೀನು ನೀಡಲು ಗುಲಬರ್ಗಾ ವಿ.ವಿ. ಒಪ್ಪಿಗೆ ಸೂಚಿಸಿರುವುದರಿಂದ ಮುಂದಿನ ಪ್ರಕ್ರಿಯೆಗೆ ಚಾಲನೆ ನೀಡುವಂತೆ ತಿಳಿಸಿದರು.
ಸಭೆಯಲಿ ಭಾಗವಹಿಸಿದ ಕೆ.ಕೆ.ಆರ್.ಡಿ.ಬಿ. ಉಪ ಕಾರ್ಯದರ್ಶಿ ಎಂ.ಕೆ.ಪ್ರಮೀಳಾ ಅವರು ಮಾತನಾಡಿ ಪ್ರಸಕ್ತ ವರ್ಷದ ಮಂಡಳಿಯ ಕ್ರಿಯಾ ಯೋಜನೆಯಲ್ಲಿ ಕಲಬುರಗಿ ಮತ್ತು ಕೊಪ್ಪಳದಲ್ಲಿ ಮಲ್ಟಿ ಸ್ಕಿಲ್ ಡೆವಲೆಪ್‌ಮೆಂಟ್ ಸೆಂಟರ್ ಸ್ಥಾಪನೆಗೆ ತಲಾ 60 ಕೋಟಿ ರೂ. ಮೀಸಲಿರಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿ.ಟಿ.ಟಿ.ಸಿ. ವ್ಯಸ್ಥಾಪಕ ನಿರ್ದೇಶಕ ದಿನೇಶ ಕುಮಾರ್ ಅವರು ಮಲ್ಟಿ ಸ್ಕಿಲ್ ಡೆವಲೆಪ್‌ಮೆಂಟ್ ಸೆಂಟರ್ ಸ್ಥಾಪನೆ ಉದ್ದೇಶ ಮತ್ತು ಅದರ ವೈಶಿಷ್ಟö್ಯಗಳ ಕುರಿತು ಮಾತನಾಇ, ಕಲಬುರಗಿಯಲ್ಲಿ ಪ್ರತಿ ವರ್ಷ ತಲಾ 1,250 ಪುರುಷ/ ಮಹಿಳೆಯರು ಸೇರಿದಂತೆ ಒಟ್ಟು 2,500 ಅಭ್ಯರ್ಥಿಗಳಿಗೆ ಉದ್ಯೋಗ ಆಧಾರಿತ ವಸತಿ ಸಹಿತ ಕೌಶಲ್ಯ ತರಬೇತಿ ನೀಲಾಗುವುದು. ಎಲೆಕಟ್ರಿಕಲ್, ಮೈನಿಂಗ್ , ಕೃಷಿ ತಂತ್ರಜ್ಞಾನ, ಫಾರ್ಮಾ, ಆಟೋಮೇಷನ ಕ್ಷೇತ್ರಕ್ಕೆ ಇಲ್ಲಿ ಆದ್ಯತೆ ನೀಲಾಗುತ್ತದೆ. ಸ್ಥಳೀಯ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆ ನಡುವೆ ಸೇತುವೆಯಾಗಿ ಈ ಸೆಂಟರ್ ಕಾರ್ಯನಿರ್ವಹಿಸಲಿದ್ದು, ವಿಶೇಷವಾಗಿ ಸ್ಥಳೀಯ ಕೈಗಾರಿಕೆಗಳು, ಕಾರ್ಖಾನೆಗಳ ಬೇಡಿಕೆ ಅನಗುಣವಾಗಿ ತಾಂತ್ರಿಕ ಮತ್ತು ತಾಂತ್ರಿಕೇತರ, ಹಬ್ & ಸ್ಪೋಕ್ ಮಾದರಿಯಲ್ಲಿ 15-45 ವರ್ಷದ ಒಳಗಿನ ಅಭ್ಯರ್ಥಿಯನ್ನು ಗುರಿಯಾಗಿಸಿ ಉದ್ಯೋಗಾಧಾರಿತ ತರಬೇತಿ ನೀಡಲಾಗುತ್ತದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಬ್ದುಲ್ ಅಜೀಮ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮುರಳಿಧರ ರತ್ನಗಿರಿ, ಕಲಬುರಗಿ ಜಿ.ಟಿ.ಟಿ.ಸಿ ಪ್ರಾಂಶುಪಾಲರಾದ ಸುಧಾರಾಣಿ ಇದ್ದರು.
Post a Comment