*ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ದಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ- ಸಚಿವ ಪ್ರಿಯಾಂಕ್ ಖರ್ಗೆ*
ಕಲಬುರಗಿ,ಸೆ.9(ಕ.ವಾ) ಸಂವಿಧಾನದ ಕಲಂ 371 ಜೆ ಜಾರಿಗೆ ಬಂದು ಹತ್ತು ವರ್ಷಗಳು ಆದ ಈ ಸಂದರ್ಭದಲ್ಲಿ ಕಲಬುರಗಿ ಯಲ್ಲಿ ಸೆಪ್ಟೆಂಬರ್ 17 ರಂದು ನಡೆಯಲಿರುವ ದಶಮಾನೋತ್ಸವ ಏರ್ಪಡಿಸಲಾಗಿದೆ ಹಾಗೂ ಹತ್ತು ವರ್ಷಗಳ ನಂತರ ನಡೆಯುತ್ತಿರುವ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದ್ದು, ಈ ಭಾಗದ ಸಮಗ್ರ ಅಭಿವೃದ್ದಿಗೆ ನೀಲಿ ನಕ್ಷೆ ತಯಾರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಈಗಾಗಲೇ ಎರಡು ಮೂರು ಸಭೆ ನಡೆಸಿದ್ದರಿಂದ ಒಂದು ಕ್ಲಾರಿಟಿ ಸಿಕ್ಕಿದೆ.ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಕೈಗಾರಿಕೆ ನೀತಿ ರೂಪಿಸುವುದು ಸೇರಿದಂತೆ ಉದ್ಯೋಗ ಸೃಷ್ಠಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳುವ ದೃಷ್ಠಿಯಿಂದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರ, ಸಂಘ ಸಂಸ್ಥೆಗಳಿಂದ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಬೇಡಿಕೆ ಸಲ್ಲಿಸಿದ್ದಾರೆ.
"ಬೇಡಿಕೆ ಹಾಗೂ ಸಲಹೆಗಳ ಜೊತೆಗೆ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಪರೀಶೀಲನೆ ನಡೆಸಿ, ಮೈಕ್ರೋ ಹಾಗೂ ಮ್ಯಾಕ್ರೋ ಬೇರ್ಪಡಿಸಿ ಅದಕ್ಕೆ ತಕ್ಕಂತೆ ಪಟ್ಟಿಯನ್ನು ತಯಾರಿಸಿ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತನಾಡಿ ಆ ನಂತರ ಸಿಎಂ ಜತೆ ಚರ್ಚಿಸಿ ಯಾವ ವಿಷಯಗಳು ಸಚಿವ ಸಂಪುಟದ ಚರ್ಚೆಗೆ ತರಬೇಕು ಎಂದು ನಿರ್ಣಯ ಕೈಗೊಳ್ಳಲಿದ್ದೇವೆ" ಎಂದು ಪ್ರಿಯಾಂಕ್ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳ ಜನಪ್ರತಿನಿಧಿಗಳ, ಶಾಸಕರ ಹಾಗೂ ಸಂಘ ಸಂಸ್ಥೆಗಳಿಂದಲೂ ಬೇಡಿಕೆ ಪಟ್ಟಿಯನ್ನು ಸಂಗ್ರಹಿಸಲು ಕಲಬುರಗಿಯ ವಿಭಾಗೀಯ ಆಯುಕ್ತರಿಗೆ ಸೂಚಿಸಲಾಗಿದೆ. ಇನ್ನೂ ಒಂದು ವಾರ ಕಾಲಾವಕಾಶ ಇದ್ದು ಬೇಡಿಕೆ ಗಳುಳ್ಳ ಸಲಹೆಗಳನ್ನು ಕೂಲಂಕುಶವಾಗಿ ಪರಿಶೀಲಿಸಲಾಗುವುದು ಎಂದರು.
ಸೌಲಭ್ಯ
ಆರ್ಟಿಕಲ್ 371 ಜೆ ಜಾರಿಗೆ ಬಂದ ನಂತರ ಈ ಭಾಗದ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಅನುಕೂಲವಾಗಿದೆ. ಈ ವರ್ಷದಲ್ಲಿ ಮೀಸಲಾತಿ ಸೌಲಭ್ಯ ಪಡೆದುಕೊಂಡು 7,000 ವಿದ್ಯಾರ್ಥಿಗಳು ಮೆಡಿಕಲ್ ಸೀಟ್, 1388 ವಿದ್ಯಾರ್ಥಿಗಳು ಡೆಂಟಲ್, 22,200 ವಿದ್ಯಾರ್ಥಿಗಳು ಇಂಜಿನಿಯರಿಂಗ್, 3448 ಅಭ್ಯರ್ಥಿಗಳು ISMH 3800 ಅಭ್ಯರ್ಥಿಗಳು ಕೃಷಿ ಹಾಗೂ 1593 ಅಭ್ಯರ್ಥಿಗಳು ಫಾರ್ಮಸಿ ಪದವಿಗಳಿಗೆ ಸೀಟ್ ಪಡೆದುಕೊಂಡಿದ್ದಾರೆ. ಜೊತೆಗೆ 30,000 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದೆಲ್ಲ ನಮ್ಮ ಹಿರಿಯರ ಪರಿಶ್ರಮದಿಂದ ಸಾಧ್ಯವಾಗಿದೆ. ಆದರೂ ಕೂಡಾ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬೀದರ್ ದಿಂದ ಚಾಮರಾಜ ನಗರದವರೆಗೆ ಮಾನವ ಸರಪಳಿ ನಿರ್ಮಿಸಿ ದೇಶದ ಸಂವಿಧಾನದ ವಿಶಿಷ್ಟತೆ ಬಗ್ಗೆ ವಿಶ್ವದ ಜನರಿಗೆ ತಿಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಬಸವಕಲ್ಯಾಣದ ಬಳಿಯ ಕಿಣ್ಣಿ ಸಡಕ್ ಗ್ರಾಮದಿಂದ ( ಕಲಬುರಗಿ ಜಿಲ್ಲೆಯ ಗಡಿಯಿಂದ) ದೇವಲ್‍ನಾಯಕ ತಾಂಡಾವರೆಗೆ ಜಿಲ್ಲೆಯ ಗಡಿಯಿಂದ ಯಾದಗಿರಿ ಜಿಲ್ಲೆಗೆ ಮಾನವ ಸರಪಳಿ ಹೋಗಲಿದೆ. ಕಲಬುರಗಿ ಜಿಲ್ಲೆಯಲ್ಲಿ 113 ಕಿಮಿ ಉದ್ದದ ಈ ಮಾನವ ಸರಪಳಿಯಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಮಾಜದ ಎಲ್ಲರೂ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಬೀದಿ ನಾಟಕ, ಸಾಂಸ್ಕøತಿಕ ಕಲೆ, ಜಾನಪದ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಸಾವಿರಾರು ಕಿಮಿ ಹಾದಿಯಲ್ಲಿ ದಾರಿಯುದ್ದಕ್ಕೂ ನಡೆಯಲಿವೆ. ರಾಜ್ಯ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ, ದೇಶದ ಕಲೆ ಸಂಸ್ಕೃತಿ ಬಗ್ಗೆ ಆಸಕ್ತಿ ಇರುವವರು ಭಾಗಿಯಾಗಲಿದ್ದಾರೆ ಎಂದು ಸಚಿವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷರಾದ ಡಾ ಅಜಯ್ ಸಿಂಗ್,ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ್ ಸಿಂಗ್ ಮೀನಾ, ಇದ್ದರು.
ಪ್ರಜಾಪ್ರಭುತ್ವ ದಿನಾಚರಣೆ:-ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್,ಸಿ.ಇ.ಓ.ಭಂವರಸಿಂಗ್ ಮೀನಾ, ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ದೇವಿದಾಸ್ ಪಾಟೀಲ್, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೋಸ್ಟರ್ ಬಿಡುಗಡೆ ಮಾಡಿದರು.
Post a Comment