Clickable Image

Thursday, October 24, 2024

ಗ್ರಾಮ ಅಡಳಿತಾಧಿಕಾರಿ ಹುದ್ದೆ ನೇಮಕಾತಿಗೆ ಅ.26 ಮತ್ತು‌ 27 ರಂದು ಪರೀಕ್ಷೆ:* *ನಕಲು ಮುಕ್ತ ಪರೀಕ್ಷೆ ನಡೆಸಲು ಕಟ್ಟೆಚ್ಚರ ವಹಿಸುವಂತೆ ಡಿ.ಸಿ. ಸೂಚನೆ*

 *ಗ್ರಾಮ ಅಡಳಿತಾಧಿಕಾರಿ ಹುದ್ದೆ ನೇಮಕಾತಿಗೆ ಅ.26 ಮತ್ತು‌ 27 ರಂದು ಪರೀಕ್ಷೆ:*


*ನಕಲು ಮುಕ್ತ ಪರೀಕ್ಷೆ ನಡೆಸಲು ಕಟ್ಟೆಚ್ಚರ ವಹಿಸುವಂತೆ ಡಿ.ಸಿ. ಸೂಚನೆ*



ಕಲಬುರಗಿ,ಅ.25(ಕ.ವಾ) ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಇದೇ ಅಕ್ಟೋಬರ್ 26 ಮತ್ತು‌ 27 ರಂದು ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ನಕಲು ಮುಕ್ತ ಪರೀಕ್ಷೆ ನಡೆಸಲು ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.


ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪರೀಕ್ಷಾ ಪೂರ್ವ ಸಿದ್ಧತಾ ಸಭೆ ನಡೆಸಿದ ಅವರು, ಅ.26 ರಂದು ಕಲಬುರಗಿ ನಗರದ 11 ಕೇಂದ್ರದಲ್ಲಿ ಪರೀಕ್ಷೆ‌ ನಡೆಯಲಿದ್ದು, 4,416 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದೇ ರೀತಿ ಅ.27 ರಂದು ಕಲಬುರಗಿ ನಗರದ 42 ಮತ್ತು ತಾಲೂಕಾ ಕೇಂದ್ರಸ್ಥಾನದಲ್ಲಿ‌ 32 ಸೇರಿ ಒಟ್ಟು 74 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ‌ ನಡೆಯಲಿದ್ದು, 23,311 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದರು.


ಪರೀಕ್ಷೆ ಮುನ್ನವೆ ಕೇಂದ್ರದ ಮುಖ್ಯಸ್ಥರು, ಕೇಂದ್ರದಲ್ಲಿ ಬೆಳಕು, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಮತ್ತು ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶ ಮುನ್ನ ಸೂಕ್ತ ತಪಾಸಣೆಗೆ ಪುರುಷ, ಮಹಿಳಾ ಪೊಲೀಸ್ ಪೇದೆಯರನ್ನು ನಿಯೋಜಿಸಬೇಕೆಂದು ಅಧಿಕಾರಿಗಳಿಗೆ ಡಿ.ಸಿ. ಅವರು ನಿರ್ದೇಶನ ನೀಡಿದರು.



ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಇಲ್ಲಿ ಅವಕಾಶ ಇರುವುದಿಲ್ಲ. ಪರೀಕ್ಷೆ ದಿನ ಏನಾದರೆ ಲೋಪಗಳಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಪರೀಕ್ಷೆ ದಿನದಂದು ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದರು.


ಪರೀಕ್ಷೆ ಸುಗಮವಾಗಿ ಜರುಗಲು ಪ್ರತಿ ಕೇಂದ್ರಕ್ಕೆ ಉಪ ಮುಖ್ಯ ಅಧೀಕ್ಷಕರು, ವೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ವಿಶೇಷ ಜಾಗೃತ ದಳದ ಸದಸ್ಯರನ್ನು ನೇಮಿಸಲಾಗಿದೆ. ಅಲ್ಲದೆ ಪತ್ರಿಕೆ ಸಾಗಾಟಕ್ಕೆ ರೂಟ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ ಎಂದು ಡಿ.ಸಿ. ತಿಳಿಸಿದರು.


ಸಭೆಯಲ್ಲಿ ಕಲಬುರಗಿ ನಗರ ಉಪ ಪೊಲೀಸ್ ಆಯುಕ್ತೆ (ಲಾ & ಆರ್ಡರ್) ಕನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀನಿಧಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಸೇರಿದಂತೆ ಪರೀಕ್ಷಾ ಕೇಂದ್ರದ ಉಪ ಮುಖ್ಯ ಅಧೀಕ್ಷಕರು, ವೀಕ್ಷಕರು, ಜಾಗೃತ ದಳದ ಸದಸ್ಯರು, ರೂಟ್ ಅಧಿಕಾರಿಗಳು ಹಾಜರಿದ್ದರು.

Post a Comment

Whatsapp Button works on Mobile Device only