Clickable Image

Thursday, October 31, 2024

ತೊಗರಿ ಆರೋಗ್ಯ ಸಮೀಕ್ಷೆ ಕಾರ್ಯಕ್ಕೆ ಸಚಿವ‌ ಪ್ರಿಯಾಂಕ್ ಖರ್ಗೆ ಚಾಲನೆ*

 *ತೊಗರಿ ಆರೋಗ್ಯ ಸಮೀಕ್ಷೆ ಕಾರ್ಯಕ್ಕೆ ಸಚಿವ‌ ಪ್ರಿಯಾಂಕ್ ಖರ್ಗೆ ಚಾಲನೆ*






ಕಲಬುರಗಿ,ಅ.31(ಕ.ವಾ) ಜಿಲ್ಲೆಯಲ್ಲಿ ಬೆಳೆಯಲಾದ ತೊಗರಿ ಅರೋಗ್ಯದ ಕುರಿತ ಕೃಷಿ ವಿಜ್ಞಾನಿ ಮತ್ತು ಅಧಿಕಾರಿಗಳು ಕ್ಷಿಪ್ರ ಸಂಚಾರ‌ ಸಮೀಕ್ಷೆ ಕೈಗೊಂಡು ರೈತರಿಗೆ ನಿರ್ವಹಣಾ ಕ್ರಮಗಳ ಕುರಿತು ಮಾಹಿತಿ ನೀಡುವ ಸಮೀಕ್ಷೆ ಕಾರ್ಯಕ್ಕೆ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದಿಲ್ಲಿ ಚಾಲನೆ ನೀಡಿದರು.


ಗುರುವಾರ ಡಿ.ಸಿ. ಕಚೇರಿ ಅವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ತಾಲೂಕಾವಾರು ಹಂಚಿಕೆಯಾದ ಕೃಷಿ ವಾಹನಗಳಿಗೆ ಸಚಿವರು ಮತ್ತು ಗಣ್ಯರು ಚಾಲನೆ ನೀಡಿದರು.


ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಈ ಸಂದರ್ಭದಲ್ಲಿ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಸುಮಾರು 30 ವರ್ಷಗಳಿಂದ ಕ್ಷಿಪ್ರ ಸಂಚಾರಿ ಸಮೀಕ್ಷೆ ಮಾಡುವ ಮೂಲಕ ತೊಗರಿ ಆರೋಗ್ಯದ ಬಗ್ಗೆ ರೈತರಿಗೆ ಪ್ರತಿ ವಾರ ಮಾಹಿತಿ ನೀಡುತ್ತಿದ್ದು, ಇದರಿಂದ ರೈತರುಗಳಿಗೆ ಕಾಲಕಾಲಕ್ಕೆ ತೊಗರಿ ಬೆಳೆಗೆ ಬರುವ ಸಂಭವನೀಯ ರೋಗ ಮತ್ತು ಪೀಡೆಗಳ ಬಾಧೆಗಳ ನಿರ್ವಹಣೆಗೆ ಅನುಕೂಲವಾಗುತ್ತಿದೆ ಎಂದರು.


ಪ್ರಸಕ್ತ ಸಾಲಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ, ಕಬ್ಬು ಹಾಗೂ ಹತ್ತಿಯನ್ನು ಕ್ರಮವಾಗಿ 6.06, 0.49 ಹಾಗೂ 1.06 ಲಕ್ಷ ಹಕ್ಕೇರ್ ಗಳಲ್ಲಿ ಬಿತ್ತನೆಯಾಗಿದೆ. ಇನ್ನು ಹಿಂಗಾರು ಹಂಗಾಮಿನಲ್ಲಿ ಕಡಲೆ ಮತ್ತು ಜೋಳ ಕ್ರಮವಾಗಿ 1.10 ಮತ್ತು 0.77 ಲಕ್ಷ ಹೆಕ್ಟೇರ್ ಗಳಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ. 


ಕೃಷಿ ಇಲಾಖೆಯು ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ತಾಲೂಕಿಗೆ ಒಂದರಂತೆ ತಂಡಗಳನ್ನು ರಚಿಸಿದ್ದು, ಮುಂಗಾರು ಮತ್ತು ಹಿಂಗಾರು ಹಂಗಾಮಿನ ತಾಕುಗಳಿಗೆ ಸಾಪ್ತಾಹಿಕವಾಗಿ 8 ವಾರಗಳ ಕಾಲ ಸತತ ಭೇಟಿ ನೀಡಿ ಬೆಳೆಗಳ ಬೆಳವಣಿಗೆ, ಅವುಗಳಲ್ಲಿರುವ ರೋಗ ಮತ್ತು ಪೀಡೆಗಳ ಬಾಧೆಗಳನ್ನು ಗುರುತಿಸಿ ಹಾಗೂ ಅವಶ್ಯಕವಿರುವ ನಿಯಂತ್ರಣ ಮಾಹಿತಿಗಳನ್ನು ತಿಳಿದುಕೊಂಡು ತಾಂತ್ರಿಕವಾಗಿ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಮಾಧ್ಯಮದ ಮೂಲಕ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಇದರಿಂದ ರೈತರಿಗೆ ರೋಗ ಮತ್ತು ಕೀಟನಾಶಕ ಸಿಂಪರಣೆಯಲ್ಲಿ ವೆಚ್ಚ ಕಡಿಮೆಯಾಗಲಿದೆ.


ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಇದ್ದರು.




Post a Comment

Whatsapp Button works on Mobile Device only