ನವರಾತ್ರಿ ಸಂದೇಶ
ತಮಗೆ ಹಾಗೂ ತಮ್ಮ ಕುಟುಂಬ ಎಲ್ಲ ಸದಸ್ಯರಿಗೂ, ಸ್ನೇಹಿತರಿಗೂ ನಾಡು ಹಬ್ಬದ ವಿಜಯ ದಶಮಿಯ ಹಬ್ಬದ ಹಾರ್ದಿಕ ಶುಭಾಶಯಗಳು.
ಆಶ್ವೀಜ ಮಾಸವು ವಿಶೇಷತೆಯಿಂದ ಕೂಡಿದೆ ದೇಶಾದ್ಯಂತ ಜಗನ್ಮಾತೆ ಪಾರ್ವತಿಯನ್ನು ದುರ್ಗಿ ರೂಪದಿಂದ ಪೂಜಿಸುವ ಸಂಪ್ರದಾಯ ಕಾಣುತ್ತೇವೆ. ಇದೊಂದು ಹಿಂದುಗಳಿಗೆ ಪವಿತ್ರವಾದ ಹಬ್ಬವಾಗಿದೆ. ಬ್ರಹ್ಮ, ವಿಷ್ಣು ಮತ್ತು ರುದ್ರರು ದೇವಿಯನ್ನು ಆರಾಧಿಸಿ ಪ್ರತ್ಯಕ್ಷ ಮಾಡಿಕೊಂಡು, ಜಗತ್ತಿನ ಕಂಟಕರಾದ ದುಷ್ಟ ರಾಕ್ಷಸರನ್ನು ಸಂಹರಿಸಿ, ಜಗತ್ತನ್ನು ರಕ್ಷಿಸಿ ಪೋಷಿಸುವಂತೆ ಮಾಡಿದ್ದಾರೆ. ಮಹಾತ್ಮ ಶ್ರೀ ಚಿದಾನಂದ ಅವಧೂತರು ಶ್ರೀ ದೇವಿಯ ಚರಿತ್ರೆಯನ್ನು ಈ ನವರಾತ್ರಿಗಳಲ್ಲಿಯೇ ಬರೆದರೆಂದು ಪ್ರತೀತಿಯಿದೆ. ಸಿಂಧನೂರು ತಾಲ್ಲೂಕಿನ ಸಿದ್ಧಪರ್ವತ ಎಂಬದು ದೇವಿಯ ಮೂಲ ಸ್ಥಳವಾಗಿದ್ದು, ಅಲ್ಲಿ ಚಿದಾನಂದರು ತಪಸ್ಸುಮಾಡಿ ಪ್ರತ್ಯಕ್ಷ ಮಾಡಿಕೊಂಡು ಅವಳ ಶ್ರೀ ಚರಿತ್ರೆಯನ್ನು ಬಹು ಸುಂದರವಾಗಿ ೧೮ ಅಧ್ಯಾಯಗಳಲ್ಲಿ ರಚಿಸಿ ಜನತೆಗೆ ಆಶೀರ್ವಾದ ರೂಪದ ಕೊಡುಗೆಯಾಗಿ ಕೊಟ್ಟಿದ್ದಾರೆ. ಸಂಸ್ಕೃತದಲ್ಲಿ “ದುರ್ಗಾಸಪ್ತಶತಿ” ಎಂದು ಇದ್ದರೆ ಶ್ರೀ ಚಿದಾನಂದ ಅವಧೂತರು ಜನರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ಭಾಮಿನಿ ಷಟ್ಪದಿ ರೂಪದಲ್ಲಿ ರಚಿಸಿದ್ದಾರೆ. ಈ ಗ್ರಂಥವನ್ನು ನವರಾತ್ರಿಗಳಲ್ಲಿ ಪಠಿಸುವುದು ಸಂಪ್ರದಾಯವಾಗಿದೆ. ಶ್ರೀ ದೇವಿಯನ್ನು ಕುರಿತು ಹಲವಾರು ಋಷಿಗಳು ಪೂಜಿಸಿ, ಧ್ಯಾನಿಸಿ ಹಲವಾರು ಹೆಸರುಗಳಿಂದ ಕರೆದಿದ್ದಾರೆ. ಹಾಗೂ ಭಾರತಾದ್ಯಂತ ಹಲವಾರು ಪ್ರದೇಶದಲ್ಲಿ ಬೇರೆ-ಬೇರೆ ನಾಮಗಳಿಂದ ಕರೆದಿರುವುದನ್ನು ಕಾಣುತ್ತೇವೆ.
ಮೈಸೂರಿನಲ್ಲಿ ಚಾಮುಂಡಿಯಾಗಿ, ಕೊಲ್ಲೂರಿನಲ್ಲಿ ಮೂಕಾಂಬಿಕೆಯಾಗಿ, ಸಿರಸಿಯಲ್ಲಿ ಕಾಳಿಕೆಯಾಗಿ, ಹೊರನಾಡಿನಲ್ಲಿ ಅನ್ನಪೂರ್ಣೇಶ್ವರಿಯಾಗಿ, ಶೃಂಗೇರಿಯಲ್ಲಿ ಶಾರದೆಯಾಗಿ, ಬದಾಮಿಯಲ್ಲಿ ಬನಶಂಕರಿಯಾಗಿ, ಮಧುರೆಯಲ್ಲಿ ಮಿನಾಕ್ಷಿಯಾಗಿ, ಕಂಚಿಯಲ್ಲಿ ಕಾಮಾಕ್ಷಿಯಾಗಿ, ಕೊಲ್ಲಾಪೂರದಲ್ಲಿ ಮಹಾಲಕ್ಷ್ಮಿಯಾಗಿ, ತುಳಜಾಪೂರದಲ್ಲಿ ಅಂಬಾಭವಾನಿಯಾಗಿ ಹೀಗೆ ಮೊದಲಾದ ಪುಣ್ಯ ತೀರ್ಥಕ್ಷೇತ್ರಗಳಲ್ಲಿ ತಾಯಿ ಪಾರ್ವತಿಯು ಅನೇಕ ರೂಪ, ಮಹಿಮೆಗಳಿಂದ ನೆಲೆಸಿದ್ದಾಳೆ. ಇದೆಲ್ಲ ಗಮನಿಸಿದರೆ ಕರ್ನಾಟಕವೇ ಧನ್ಯವೆನ್ನಬಹುದು. ಏಕೆಂದರೆ ಇಲ್ಲಿ ದೇವಿಯು ಹಲವಾರು ರೂಪ, ನಾಮಗಳಿಂದ ಅನೇಕ ಕಡೆಗಳಲ್ಲಿ ನೆಲೆಸಿದ್ದಾಳೆ. ಇಂಥ ದೇವಿಯ ಚರಿತ್ರೆಯನ್ನು ನವರಾತ್ರಿಗಳಲ್ಲಿ ಪಾರಾಯಣ ಮಾಡುವುದರಿಂದ ಪಾಪಗಳನ್ನು ಕಳೆದುಕೊಂಡು ದೇವಿಯ ಕೃಪೆಗೆ ಪಾತ್ರರಾಗಿ ಮೋಕ್ಷ ಹೊಂದುವರು.
ವೇದವ್ಯಾಸ ವಿರಚಿತ ಶ್ರೀ ದೇವಿ ಭಾಗವತವಾಗಲಿ, ದುರ್ಗಾಶಪ್ತಸತಿಯಾಗಲಿ, ಕನ್ನಡದ ಶ್ರೀ ದೇವಿ ಮಹಾತ್ಮೆಯಾಗಲಿ, ನವರಾತ್ರಿಯಿಂದ ಒಂಭತ್ತು ದಿನಗಳಲ್ಲಿ ಅತ್ಯಂತ ಶುಚಿರ್ಭುತದಿಂದ ಪಠಿಸಬೇಕು. ಶ್ರೀ ದೇವಿಯನ್ನು ಆರಾಧಿಸಿ ಆಶೀರ್ವಾದ ಪಡೆಯಬೇಕೆಂದಿರುವ ಭಕ್ತನು ಪ್ರತಿದಿನ ಪ್ರಾತಃಕಾಲದಲ್ಲಿ ನಿದ್ರೆಯಿಂದ ಎಚ್ಚರಾಗಿ ಹಾಸಿಗೆಯ ಮೇಲೆಯೇ ಪೂರ್ವಕ್ಕೆ ಅಥವ ಉತ್ತರಕ್ಕೆ ಮುಖಮಾಡಿ ತನ್ನ ಇಷ್ಟ ದೇವತೆಯನ್ನು ನಿಶ್ಚಲ ಮನಸ್ಸಿನಿಂದ ಮತ್ತು ದೃಢಭಕ್ತಿಯಿಂದ ಧ್ಯಾನಿಸಿ ಕರಗಳಿಗೆ ನಮಸ್ಕರಿಸಿ ಹಾಸಿಗೆಯಿಂದ ಎದ್ದು ಮುಖ ಮಾರ್ಜನ ಮಾಡಿ, ಶೌಚಾದಿ ಕ್ರಿಯೆಗಳನ್ನು ಮುಗಿಸಿ, ಮರದ (ಬೇವಿನ, ಉತರಾಣಿ, ಅತ್ತಿ, ಬಿಲ್ವ ಮೊದಲಾದ) ಕಡ್ಡಿಯಿಂದ ದಂತಧಾವನ ಮಾಡಬೇಕು. ಈ ಕಡ್ಡಿಯು 12 ಅಂಗಲವಿರಬೇಕು.
ಅತ್ತಿಯ ಕಡ್ಡಿಯಿಂದ ವಾಕ್ಕಸಿದ್ಧಿ, ಆಲದ ಕಡ್ಡಿಯಿಂದ ಸಕಲ ಸಂಪತ್ತು, ಉತರಾಣಿ ಕಡ್ಡಿಯಿಂದ ಸಕಲ ಸಿದ್ಧಿ, ಮಾವಿನ ಕಡ್ಡಿಯಿಂದ ರಾಜ ಪೂಜ್ಯತೆ, ಹಲಸಿನ ಕಡ್ಡಿಯಿಂದ ಸೌಭಾಗ್ಯ, ನೇರಲ ಕಡ್ಡಿಯಿಂದ ದೀರ್ಘಾಯುಷ್ಯ, ಬೇವಿನ ಕಡ್ಡಿಯಿಂದ ರೋಗ ನಿವೃತ್ತಿಯಾಗಿತ್ತವೆಂದು ಧರ್ಮಶಾಸ್ತ್ರ, ವೈದ್ಯಶಾಸ್ತ್ರಗಳು ನಿರ್ಣಯಿಸುತ್ತವೆ. ಮನಸ್ಸು ಶುದ್ಧಿಯಾಗಿಟ್ಟುಕೊಂಡು ಪೂರ್ವಕ್ಕೆ ಅಥವಾ ಉತ್ತರಕ್ಕಭಿಮುಖಮಾಡಿ ಶುದ್ಧ ನೀರಿನಿಂದ ಸ್ನಾನ ಮಾಡಬೇಕು. ಮಡಿಬಟ್ಟೆ ಧರಿಸಿ, ಶುದ್ಧವಾದ ನೀರು ತುಂಬಿದ ತಂಬಿಗೆಯನ್ನು ಹಿಡಿದು “ಓಂ ಹ್ರೀಂ ಚಂಡಿಕಾಯೈ ನಮಃ” ಎಂಬ ಮಂತ್ರ ಪಠಿಸುತ್ತ ಜಲಶುದ್ಧಿ, ಸ್ಥಳಶುದ್ಧಿ ಮಾಡಬೇಕು. ಜೊತೆಗೆ ಪೂಜಾ ಸಾಮಗ್ರಿಗಳನ್ನು ಶುದ್ಧಿಕರಿಸಬೇಕು. ಪೂಜೆಗೆ ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ಶ್ರೀ ದೇವಿ ಮೂರ್ತಿಯನ್ನು ಭಕ್ತಿಯಿಂದ ಅಷ್ಟ, ಷೋಡಶ ಉಪಚಾರಗಳಿಂದ ಪೂಜಿಸಬೇಕು. ಅಭಿಷೇಕ, ವಿಭೂತಿ, ಗಂಧ, ಅಕ್ಷತೆ, ಪತ್ರಿಪುಷ್ಪ, ಧೂಪ, ದೀಪ, ಘಂಟೆ, ನೈವಿದ್ಯ, ಪಾನೀಯ, ತಾಂಬೂಲ, ಫಲಗಳು, ನೀರಾಂಜನ ದೀಪ, ಕರ್ಪೂರ, ಪುಷ್ಪಾಂಜಲಿ, ಪ್ರದಕ್ಷಿಣೆ, ಕ್ಷಮಾರ್ಪಣೆ, ನಮಸ್ಕಾರ ಮೊದಲಾದವುಗಳಿಂದ ಪೂಜಿಸಿ ಪಾರಾಯಣಕ್ಕೆ ತೊಡಗಬೇಕು. ಇದರಿಂದ ನಮ್ಮಲ್ಲಿರುವ ರಕ್ಷಸಿ ಗುಣಗಳು ನಾಶವಗುತ್ತವೆ. ಷೋಡಶೋಪಚಾರಗಳ ಮಂತ್ರ ಬರದಿದ್ದರೆ ದೇವಿಯ ಮೂಲ ಮಂತ್ರವಾದ “ಓಂ ಹ್ರೀಂ ಚಂಡಿಕಾಯೈ ನಮಃ” ಎಂದು ಪ್ರತಿಸಲ ಹೇಳುತ್ತ ಪೂಜಿಸಬೇಕು.
ಶ್ರೀ ದೇವಿಯ ಚರಿತ್ರೆಯನ್ನು ಪೂರ್ಣವಾಗಿ ಒಂದು ದಿನದಂತೆ ಒಂದು ವರ್ಷ ಓದಿದರೆ ಶ್ರೀ ದೇವಿಯು ಪ್ರತ್ಯಕ್ಷಳಾಗುವಳು ಎಂದು ಶ್ರೀ ದೇವಿಯ ಚರಿತ್ರೆಯು ಸಾರುತ್ತದೆ. ಪೂಜೆ ಇಲ್ಲವೆ ಪಾರಾಯಣಕ್ಕಿಂತ ಮೊದಲು ಭಕ್ತರು ಶ್ರೀ ದೇವಿಯನ್ನು ಕುರಿತು “ತಾಯಿ ನನ್ನಿಂದ ಹಗಲು-ರಾತ್ರಿಗಳಲ್ಲಿ ಸವಿರಾರು ತಪ್ಪುಗಳಾಗಿವೆ. ನಾನು ನಿನ್ನ ಮಗನೆಂದು ಕ್ಷಮಿಸು. ಮಡಿ-ಮೈಲಿಗೆ, ಆಚಾರ-ವಿಚಾರ, ಜಾಣತನ, ತಿಳುವಳಿಕೆ ಇಲ್ಲ. ಮಂತ್ರ-ತಂತ್ರ, ಜಪ-ತಪ, ಪೂಜೆಗಳನ್ನು ನಾನರಿಯೇ. ಪೂಜಾಸಾಮಗ್ರಿ ಮಂತ್ರ, ಕ್ರಿಯಾ, ಭಕ್ತಿಗಳಿಂದ ಕೊರತೆಯಾದ ಪೂಜೆಯನ್ನು ಕ್ಷಮಿಸಿ ಪೂರ್ಣ ಮಾಡಿಕೊ. ನನ್ನ ದುಃಖವನ್ನು ಪರಿಹರಿಸಿ ಆನಂದವನ್ನುಂಟು ಮಾಡಲು ನಿನ್ನ ಹೊರತು ಅನ್ಯರು ಸಮರ್ಥರೇ? ನಿನಗೆ ಶರಣಾಗತನಾಗುವುದೊಂದೆ ನನ್ನ ಕರ್ತವ್ಯ. ಏನು ಮಾಡುವುದರಿಂದ ನಿನ್ನ ದರ್ಶನ ದೊರೆಯುವದೋ ಅದನ್ನು ನನ್ನಿಂದ ಮಾಡಿಸುವ ಸಂಪೂರ್ಣ ಭಾರವು ನಿನ್ನದೆ ಆಗಿದೆ.” ಎಂದು ನಿರ್ಮಲ ಮನಸ್ಸಿನಿಂದಲೂ, ದೃಡಭಕ್ತಿಯಿಂದಲೂ ಪ್ರಾರ್ಥಿಸಿ ಪೂಜಿಸಬೇಕು. ಪೂಜಾಸಾಮಗ್ರಿಗಳು ದೊರೆಯದಿದ್ದರೂ ಕೇವಲ ಭಕ್ತಿಯಿಂದ ಪೂಜಿಸಬೇಕು. ಇಲ್ಲಿ ಭಕ್ತಿಯ ಭಾವವೇ ಮುಖ್ಯ. ಸರ್ವರಿಗೂ ಶುಭವಾಗಲಿ. ಮಂಜು ಸ್ವಾಮಿ ವರದಿ...
Post a Comment