*ಜಿಲ್ಲಾಧಿಕಾರಿಗಳಿಂದ ಅಸ್ಪತ್ರೆಗಳಿಗೆ ಭೇಟಿ, ಸ್ವಚ್ಛತೆ ಕಾಪಾಡಲು ಸೂಚನೆ*
ಕಲಬುರಗಿ,ಅ.15(ಕ.ವಾ) ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಅವರೊಂದಿಗೆ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರ, ತಾಲೂಕಾ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳಿಗೆ ನೀಡಲಾಗುತ್ತಿರುವ ವೈದ್ಯ ಉಪಚಾರ ಪರಿಶೀಲಿಸಿದಲ್ಲದೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಮತ್ತು ರೋಗಿಗಳಿಗೆ ಸರಿಯಾಗಿ ಉಪಚರಿಸುವಂತೆ ವೈದ್ಯ ಸಿಬ್ಬಂದಿಗಳಿಗೆ ಸೂಚಿಸಿದರು.
ಮೊದಲಿಗೆ ಕಲಬುರಗಿ ತಾಲೂಕಿನ ನಂದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಡಿ.ಸಿ ಅವರು, ಹೆರಿಗೆಗೆಂದು ಬರುವ ಗರ್ಭಿಣಿ ಮಹಿಳೆಯರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ಅನಗತ್ಯ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ಬದಲು ಇಲ್ಲಿಯೆ ಹೆರಿಗೆ ಮಾಡಬೇಕು. ದಾಖಲೆ ಎಲ್ಲವು ಸರಿಯಾಗಿಟ್ಟುಕೊಳ್ಳಬೇಕೆಂದು ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.
ಶಹಾಬಾದ ಸಮುದಾಯ ಆರೋಗ್ಯ ಕೇಂದ್ರಕ್ಕೂ ಡಿ.ಸಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿ ವೈದ್ಯರು ಸರಿಯಾಗಿ ಬರಲ್ಲ. ರಾತ್ರಿ ಹೊತ್ತಿನಲ್ಲಿ ಸಿಬ್ಬಂದಿ ಇಲ್ಲದೆ ಇರುವುದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಡಿ.ಸಿ. ಗಮನಕ್ಕೆ ತಂದರು. ಈ ಕೂಡಲೆ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ತೋರುವ ವೈದ್ಯ ಸಿಬ್ಬಂದಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಡಿ.ಎಚ್.ಓ ಡಾ.ಶರಣಬಸಪ್ಪ ಖ್ಯಾತನಾಳ ಅವರಿಗೆ ಡಿ.ಸಿ. ಸೂಚನೆ ನೀಡಿದರು. ನಂತರ ಹಳೇ ಶಹಾಬಾದಿನಲ್ಲಿರುವ "ನಮ್ಮ ಕ್ಲಿನಿಕ್" ಗೂ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಪರಿಶೀಲಿಸಿದರು.
*ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮುಗುವನ್ನು ಎತ್ತಾಡಿಸಿದ ಡಿ.ಸಿ.:*
ಚಿತ್ತಾಪುರ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿನ ಮಕ್ಕಳ ವಿಭಾಗದ ಹಾಸಿಗೆಯಲ್ಲಿ ಆಟವಾಡುತ್ತಿದ್ದ ತೀವ್ರ ಅಪೌಷ್ಟಿಕತೆಯಿಂದ ಬಳುತ್ತಿದ್ದ ಮಗುವನ್ನು ಕಂಡು ಆತನನ್ನು ಎತ್ತಿಕೊಂಡು ಆಡಿಸಿದರು. ಗರ್ಭಿಣಿ ಮಹಿಳೆಯರು, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಸರಿಯಾಗಿ ನೋಡಿಕೊಳ್ಳಬೇಕು ಎಂದು ವೈದ್ಯರಿಗೆ ಸೂಚಿಸಿದರು.
ನಂತರ ತಾಲೂಕಿನ ದಿಗ್ಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮುಡಬೂಳ ಉಪ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶಹಾಬಾದ ತಹಶೀಲ್ದಾರ ಜಗದೀಶ ಚೌರ್, ತಾಲೂಕಾ ಪಂಚಾಯತ್ ಇ.ಓ ಮಲ್ಲಿನಾಥ ರಾವೂರ, ಚಿತ್ತಾಪುರ ತಹಶೀಲ್ದಾರ ನಾಗಯ್ಯ ಹಿರೇಮಠ, ತಾಲೂಕಾ ಪಂಚಾಯತ್ ಇ.ಓ ಅಕ್ರಂ ಪಾಶಾ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.
*ಭವನ ಕಾಮಗಾರಿ ಬೇಗ ಪೂರ್ಣಗೊಳಿಸಿ:*
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡುವ ಮುನ್ನ ಬೆಳಿಗ್ಗೆ ಕಲಬುರಗಿ ಮಗರದ ಸೇಡಂ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೆತ್ತಿಕೊಂಡಿರುವ ನಿರ್ಮಾಣದ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ಶಹಾಬಾದ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಭವನ ಕಾಮಗಾರಿ ವೀಕ್ಷಿಸಿ ಕೂಡಲೆ ಕಾಮಗಾರಿ ಪೂರ್ಣಗೊಳಿಸುವಂತೆ ಪಿ.ಡಬ್ಲ್ಯೂ.ಡಿ. ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಸುಭಾಷ್ ಅವರಿಗೆ ನಿರ್ದೇಶನ ನೀಡಿದರು.
Post a Comment