Clickable Image

Monday, October 21, 2024

ಯುವಕರಿಗೆ ಕೌಶಲ್ಯ ನೀಡಲು ಕೈಗಾರಿಕೆಗಳು ಪ್ರಾಧಿಕಾರದೊಂದಿಗೆ ಕೈಜೋಡಿಸಬೇಕು*

 *ಜಿಲ್ಲಾ ಕೌಶಲ್ಯ ಸಮಿತಿ ಸಭೆ:*


*ಯುವಕರಿಗೆ ಕೌಶಲ್ಯ ನೀಡಲು ಕೈಗಾರಿಕೆಗಳು ಪ್ರಾಧಿಕಾರದೊಂದಿಗೆ ಕೈಜೋಡಿಸಬೇಕು*



*-ಡಾ.ಇ.ವಿ.ರಮಣರೆಡ್ಡಿ*


ಕಲಬುರಗಿ,ಅ.21(ಕ.ವಾ) ರಾಜ್ಯದಲ್ಲಿ ವಿದ್ಯಾವಂತ ಯುವಕರಿಗೆ ಕೊರತೆ ಇಲ್ಲ. ಕೊರತೆ ಇರುವುದು ಕೌಶಲ್ಯಯುತ ಶಿಕ್ಷಣ. ಹೀಗಾಗಿ ಸ್ಥಳೀಯ ಮಾರುಕಟ್ಟೆ ಬೇಡಿಕೆ ಅನುಗುಣವಾಗಿ ಯುವಕರಿಗೆ ಕೌಶಲ್ಯ ತರಬೇತಿ ನೀಡಲು ಕೌಶಲ್ಯ ಪ್ರಾಧಿಕಾರದ ಜೊತೆ ಕೈಗಾರಿಕೆಗಳು, ಉದ್ಯಮಿಗಳು ಕೌಶಲ್ಯ ತರಬೇತಿ ಪಾಲುದಾರರಾಗಿ ಕೈಜೋಡಿಸಬೇಕೆಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಇ.ವಿ.ರಮಣರೆಡ್ಡಿ ಉದ್ಯಮಿಗಳಿಗೆ ಕರೆ ನೀಡಿದರು.


ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕೌಶಲ್ಯ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ ಪ್ರಮಾಣ ಪತ್ರ ನೀಡಿದರೆ ಸಾಲದು. ಅವರಿಗೆ ಉದ್ಯೋಗ ಆಧಾರಿತ ಕೌಶಲ್ಯ ನೀಡಿ ನೌಕರಿ ಗಿಟ್ಟಿಸಿಕೊಳ್ಳುವಂತೆ ಮಾಡುವುದು ನಮ್ಮ ಗುರಿ ಮತ್ತು ಜವಾಬ್ದಾರಿಯಾಗಬೇಕಿದೆ ಎಂದರು.



ಇನ್ನು ಕಲಬುರಗಿ ಜಿಲ್ಲೆಯಲ್ಲಿ ಸಿಮೆಂಟ್, ತೊಗರಿ ಕಣಜಕ್ಕೆ ಹೆಸರುವಾಸಿಯಾಗಿದೆ. ದಾಲ್ ಇಂಡಸ್ಟಿ ಹೆಚ್ಚಿದ್ದು, ಉದ್ಯಮಿಗಳು ಜಿಲ್ಲಾ ಕೌಶಲ್ಯ ಸಮಿತಿಯ ಸಹಯೋಗದೊಂದಿಗೆ ಉದ್ಯಮದ ಬೇಡಿಕೆಯಂತೆ ಯುವಕರಿಗೆ ಕೌಶಲ್ಯ ನೀಡುವಲ್ಲಿ ಕೈಜೋಡಿಸಿದಲ್ಲಿ ತುಂಬಾ ಅನುಕೂಲವಾಗಿದೆ. ಇದರಿಂದ ಸ್ಥಳೀಯರಿಗೆ ಇಲ್ಲಿಯೇ ಉದ್ಯೋಗ ದೊರೆಯುವ ಅವಕಾಶ ಹೆಚ್ಚಲಿದೆ ಎಂದರು.


ರಾಜ್ಯದಾದ್ಯಂತ ಟಾಟಾ ಸಂಸ್ಥೆಯ ಸಹಯೋಗದೊಂದಿಗೆ ಐ.ಟಿ.ಐ. ಸಂಸ್ಥೆಗಳಲ್ಲಿ “ಉದ್ಯೋಗ” ಯೋಜನೆಯಡಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಹೈಟೆಕ್ ಯಂತ್ರೋಪಕರಣಗಳನ್ನು ನೀಡಲಾಗಿದೆ. ಉದ್ಯಮಿಗಳು ಇಂತಹ ಸಂಸ್ಥೆಗಳಿಗೆ ಭೇಟಿ ನೀಡಿ ಅಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆಯಬೇಕೆಂದರು.


ಇನ್ನು ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾ ಕೌಶಲ್ಯ ಸಮಿತಿಯು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರ ಅಧ್ಯಕ್ಷತೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ ಡಾ. ಇ.ವಿ.ರಮಣರೆಡ್ಡಿ ಅವರು, ಜಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ, ಅದಕ್ಕೆ ಪರಿಹಾರ ಕ್ರಮಗಳ ಕುರಿತು ಅಧ್ಯಯನ ಮಾಡಿ ದತ್ತಾಂಶ ಸಂಗ್ರಹಿಸಿರುವುದು ಒಳ್ಳೆಯ ಕಾರ್ಯವಾಗಿದೆ ಎಂದ ಅವರು, ಹಳ್ಳಿ ಯುವಕನಿಗೂ ಕೌಶಲ್ಯ ನೀಡುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೌಶಲ್ಯ ಸಮಿತಿ ರಚಿಸಲಾಗಿದೆ ಎಂದರು.


*ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಹಿನ್ನೆಲೆ,ಸ್ಥಳೀಯರಿಗೆ ತರಬೇತಿ ಕೊಡಿ:*


ಕಲಬುರಗಿಯಲ್ಲಿ ಪಿ.ಎಂ.ಮಿತ್ರ ಯೋಜನೆಯಡಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲಾಗುತ್ತಿದ್ದು, ಜಿಲ್ಲೆಯ ಯುವಕರಿಗೆ ಉದ್ಯೋಗದ ಹೊಸ ಅಶಾಕಿರಣ ಮೂಡಿದೆ. ಪ್ರತ್ಯಕ್ಷವಾಗಿ 1 ಲಕ್ಷ ಮತ್ತು ಪರೋಕ್ಷ 2 ಲಕ್ಷ ಉದ್ಯೋಗ ಸೃಷ್ಠಿ ಈ ಯೋಜನೆ ಹೊಂದಿರುವುದರಿಂದ ಈಗಿನಿಂದಲೆ ಸ್ಥಳೀಯರಿಗೆ ಜವಳಿ ಉದ್ಯಮ ಕುರಿತು ತರಬೇತಿ ನೀಡಬೇಕು ಎಂದು ಅಧಿಕಾರಿಗಳಿಗೆ ಡಾ.ಇ.ವಿ.ರಮಣರೆಡ್ಡಿ ಸಲಹೆ ನೀಡಿದರು.


ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಕೌಶಲ್ಯ ಪ್ರಾಧಿಕಾರವು ಮೂರು ತಿಂಗಳಿಗೊಮ್ಮೆ ತಾಲೂಕಾ ಹಂತದಲ್ಲಿ ಉದ್ಯೋಗ ಮೇಳ ಆಯೋಜಿಸಿದಲ್ಲಿ ಹೆಚ್ಚಿನ ಜನರು ಇದರ ಲಾಭ ಪಡೆಯಬಹುದು. ಜಿಲ್ಲೆಯ ಮಾರುಕಟ್ಟೆ ಬೇಡಿಕೆಯಂತೆ 150 ಜಾಬ್ ರೋಲ್‌ಗಳನ್ನು ತರಬೇತಿ ನೀಡಲು ಗುರುತಿಸಲಾಗಿದೆ. ಉದ್ಯೋಗ ಪಡೆಯಲು ಇಂಗ್ಲೀಷ್ ಸಂವಹನ ಅಗತ್ಯವಾಗಿದ್ದು, ಬೆಂಗಳೂರು ಮತು ಹೈದ್ರಾಬಾದದಿಂದ ತಜ್ಞರನ್ನು ಆಹ್ವಾನಿಸಿ ಇಲ್ಲಿ ಸ್ಕಿಲ್ ಓಲಂಪಿಯಾಡ್, ಸಾಫ್ಟವೇರ್ ಹ್ಯಾಕಥಾನ್‌ದಂತಹ ಕೌಶಲ್ಯ ಅರಿವು ಕಾರ್ಯಕ್ರಮ ಆಯೋಜಿಸುವ ಅವಶ್ಯಕತೆ ಇದೆ ಎಂದರು.


ಇದಕ್ಕು ಮುನ್ನ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಮುರಳಿಧರ ರತ್ನಗಿರಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಜಿಲ್ಲೆಯಲ್ಲಿ ಜಿಲ್ಲಾ ಕೌಶಲ್ಯ ಸಮಿತಿಗೆ ಪೂರಕವಾಗಿ 4 ಉಪ ಸಮಿತಿ ರಚಿಸಲಾಗಿದೆ. ನಿರಂತರ ಡಿ.ಎಸ್.ಸಿ. ಸಭೆ ನಡೆಸಿ ಕೌಶಲ್ಯ ಕರ್ನಾಟಕ ಪರಣಾಮಕಾರಿ ಅನುಷ್ಠಾನಕ್ಕೆ ಮುಂದಾಗಿದ್ದೇವೆ. ಕಳೆದ 2023-24ನೇ ಸಾಲಿನಲ್ಲಿ ಮುಖ್ಯಮಂತ್ರಿ ಕರ್ನಾಟಕ ಕೌಶಲ್ಯ ಯೋಜನೆಯಡಿ 2,670, ಕೆ.ಜಿ.ಟಿ.ಟಿ.ಐ ಸಂಸ್ಥೆ ಮೂಲಕ 1,021, ಜಿ.ಟಿ.ಟಿ.ಸಿ. ಸಂಸ್ಥೆಯಿಂದ 581 ವಿದ್ಯಾರ್ಥಿಗಳಿಗೆ ಹಾಗೂ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ 866 ಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. ಜಿಲ್ಲೆಯ ಐ.ಟಿ.ಐ. ಸಂಸ್ಥೆಗಳಿಂದ ಉತ್ತೀರ್ಣರಾದ 2,215 ಜನರಲ್ಲಿ 1,882 ಜನರಿಗೆ ಪ್ಲೇಸ್ಮೆಂಟ್ ಮೂಲಕ ಉದ್ಯೋಗ ಲಭಿಸಿದೆ. ಇನ್ನು ಕಳೆದ ವರ್ಷ ಸೇಡಂನಲ್ಲಿ ಆಯೋಜಿಸಿದ ಬೃಹತ್ ಉದ್ಯೋಗ ಮೇಳದಲ್ಲಿ ಹಾಜರಾದ 4,985 ಅಭ್ಯರ್ಥಿಗಳ ಪೈಕಿ 1,888 ಜನ ಶಾರ್ಟ್ ಲಿಸ್ಟ್ಗೆ ಆಯ್ಕೆಗೊಂಡು 811 ಜನ ಉದ್ಯೋಗ ಪಡೆಯುವಲ್ಲಿ ಸಫಲರಾಗಿದ್ದಾರೆ ಎಂದು ಅಂಕಿ-ಸಂಖ್ಯೆಯೊಂದಿಗೆ ವಿವರ ನೀಡಿದರು.


ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ವ್ಯವಸ್ಥಾಪಕ ರುಬನವಾಜ್ ಅವರು ಕೌಶಲ್ಯ ಕರ್ನಾಟಕ ನಿಟ್ಟಿನಲ್ಲಿ ಪ್ರಾಧಿಕಾರವು ಹಾಕಿಕೊಂಡಿರುವ ವಿವಿಧ ಯೋಜನೆಗಳ ಸವಿಸ್ತಾರವಾಗಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.


ಕಲಬುರಗಿ ಹೆಡ್ ಹೆಲ್ಡ್ ಹೈ ಸಂಸ್ಥೆಯ ಕುಮಾರ ಬಿ.ಎನ್. ಅವರು ಕಳೆದ ಒಂದು ವರ್ಷ ಕಲಬುರಗಿ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ, ಯುವಕರ ಬೇಡಿಕೆ, ಅರಿವಿನ ಕೊರತೆ, ಮುಂದಿರುವ ಸವಾಲುಗಳ ಕುರಿತು ಅಧ್ಯಯನ ಮಾಡಿ ಅದರ ವರದಿ ಈಗಾಗಲೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿ ಅಧ್ಯಯನದ ಪ್ರಮುಖ ಶಿಫಾರಸ್ಸು ಅಂಶಗಳ ಕುರಿತು ಸಭೆಯಲ್ಲಿ ಹಂಚಿಕೊಂಡರು.


ಸಭೆಯಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ತಾಂತ್ರಿಕ ಸಲಹೆಗಾರ ಎನ್.ಎನ್. ರಾವ್, ಹೆಚ್.ಕೆ.ಸಿ.ಸಿ.ಐ ಅಧ್ಯಕ್ಷ ಶಶಿಕಾಂತ ಪಾಟೀಲ ಸೇರಿದಂತೆ ಜಿಲ್ಲಾ ಕೌಶಲ್ಯ ಸಮಿತಿಯ ಸದಸ್ಯರು ಹಾಗೂ ಇತರೆ❤️ ಅಧಿಕಾರಿಗಳು ಭಾಗವಹಿಸಿದ್ದರು.

Post a Comment

Whatsapp Button works on Mobile Device only