*ವರ್ಷದುದ್ದಕ್ಕೂ ರೆಡ್ ಕ್ರಾಸ್ ಸಂಸ್ಥೆಯ ಚಟುವಟಿಕೆಗಳು ನಡೆಯಲಿ*
*ಡಿ.ಸಿ. ಬಿ.ಫೌಜಿಯಾ ತರನ್ನುಮ್*
ಕಲಬುರಗಿ,ಅ.21(ಕ.ವಾ) ಸಾಮಾಜಿಕ ಸೇವೆಯೇ ಪ್ರಮುಖ ಧ್ಯೇಯವಾಗಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ವರ್ಷದ 365 ದಿನಳು ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಿ ಎಂದು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ 2023-24 ನೇ ಸಾಲಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ 10 ವರ್ಷಗಳಲ್ಲಿ ಏಳು ವರ್ಷಗಳ ಕಾಲ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ನಮ್ಮೆಲ್ಲರ ಮೇಲೆ ಇದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಆದ್ದರಿಂದ ಸಂಸ್ಥೆ ಸದಾ ಒಂದಿಲ್ಲ ಒಂದು ಚಟುವಟಿಕೆಗಳಿಂದ ಕೂಡುವುದು ಅಗತ್ಯವಾಗಿದೆ ಎಂದರು.
*ರಕ್ತ ನಿಧಿ ಬ್ಯಾಂಕ್:*
ಆಗಾಗ್ಗೆ ರೆಡ್ ಕ್ರಾಸ್ ಸಂಸ್ಥೆ ರಕ್ತ ದಾನ ಶಿಬಿರ ಆಯೋಜಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ಸಂಸ್ಥೆಯೇ ರಕ್ತ ನಿಧಿ( ಬ್ಲಡ್ ಬ್ಯಾಂಕ್) ಹೊಂದುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಂದಿನ ಕೆಲವೇ ದಿನಗಳಲ್ಲಿ ಅದು ಸಹ ಸಾಕಾರಗೊಳ್ಳಲಿದೆ ಎಂದು ಡಿ.ಸಿ ಇದೇ ಸಂದರ್ಭದಲ್ಲಿ ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಚಟುವಟಿಕೆಗಳು ವಿಸ್ತಾರಗೊಳ್ಳಲು ಎನ್.ಎಸ್.ಎಸ್ ಮಾದರಿ ಕಾರ್ಯಪಡೆ ಜತೆಗೇ ಜ್ಯೂನಿಯರ್ ರೆಡ್ ಕ್ರಾಸ್ ಶಿಬಿರ ರಚಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ವಿವಿಧ ಸ್ಥಳೀಯ ಸಂಸ್ಥೆಗಳಿಂದ ಮತ್ತು ಸಿ.ಎಸ್.ಆರ್ ಅಡಿ ಸಹಾಯ ಕಲ್ಪಿಸಲು ಪತ್ರ ಬರೆಯಲಾಗುವುದು ಎಂದು ಡಿ.ಸಿ. ಅವರು ಸಭೆಯಲ್ಲಿ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ ಸದಸ್ಯರು ಸಂಸ್ಥೆಯ ಕಾರ್ಯ ಚಟುವಟಿಕೆ ಮತ್ತಷ್ಟು ಉತ್ತಮಗೊಳಿಸಲು ಅನೇಕ ಸಲಹೆಗಳನ್ನು ನೀಡಿದರು.
ಸಭಾಪತಿ ಅರುಣಕುಮಾರ ಲೋಯಾ, ರಾಜ್ಯ ಶಾಖೆಯ ಆಡಳಿತ ಮಂಡಳಿ ಶಾಖೆಯ ಸದಸ್ಯ ಅಪ್ಪಾರಾವ ಅಕ್ಕೋಣಿ, ಉಪ ಸಭಾಪತಿ ಭಾಗ್ಯಲಕ್ಷ್ಮೀ ಮತ್ತಿತರರು ಹಾಜರಿದ್ದರು. ಸಂಸ್ಥೆಯ ರವೀಂದ್ರ ಶಾಬಾದಿ ಸ್ವಾಗತಿಸಿ, ಸಂಸ್ಥೆಯು ಕೈಗೊಂಡ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಖಜಾಂಚಿ ಗುಂಡೇರಾವ್ ಪದ್ಮಾಜಿ ವಾರ್ಷಿಕ ವರದಿ ಓದಿದರು. ಸದಸ್ಯ ಸುರೇಶ ಬಡಿಗೇರ ವಂದಿಸಿದರು.
Post a Comment