*ಡಿಸೆಂಬರ್ ಅಂತ್ಯಕ್ಕೆ 371ಹಾಸಿಗೆಯ ಜಯದೇವ ಆಸ್ಪತ್ರೆ ಕ.ಕ.ಭಾಗಕ್ಕೆ ಲೋಕಾರ್ಪಣೆ*
*-ಡಾ.ಶರಣಪ್ರಕಾಶ್ ಪಾಟೀಲ್
*
ಕಲಬುರಗಿ,ಡಿ.3(ಕ.ವಾ) ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಕಲಬುರಗಿ ನಗರದಲ್ಲಿ ಕೆ.ಕೆ.ಅರ್.ಡಿ.ಬಿ. ಮಂಡಳಿ ಅನುದಾನದಲ್ಲಿ ನಿರ್ಮಾಣವಾಗಿರುವ 371 ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಮತ್ತು ಸಂಸೋಧನಾ ಆಸ್ಪತ್ರೆಯ ಆಸ್ಪತ್ರೆ ಇದೇ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಉದ್ಘಾಟಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿ ನಿರ್ಮಾಣದ ಹಂತದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಪ್ರತಿಯೊಂದು ವಿಭಾಗಗಳನ್ನು ವೀಕ್ಷಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಡಿಸೆಂಬರ್ 9 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವುದರಿಂದ ಇದೇ ತಿಂಗಳಲ್ಲಿ ಉದ್ಘಾಟನೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿ ಉದ್ಘಾಟನೆಯ ದಿನಾಂಕ ಅಂತಿಮಗೊಳಿಸಲಾಗುವುದು ಎಂದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಕಲಬುರಗಿಯನ್ನು ಮೆಡಿಕಲ್ ಹಬ್ ಮಾಡುವ ಸರ್ವ ಪ್ರಯತ್ನ ಮುಂದುವರೆದಿದೆ ಎಂದರು.
ನೂತನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯ ಯಂತ್ರೋಪಕರಣಗಳ ಅಳವಡಿಕೆ ಮಾಡಲಾಗಿದ್ದು,ಈ ಭಾಗದ ಜನರಿಗೆ ಇದು ತುಂಬಾ ಅನುಕೂಲವಾಗಲಿದೆ. ಇದೇ ರೀತಿ ಹುಬ್ಬಳ್ಳಿಯಲ್ಲಿ ಸಹ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದ್ದು, ಶೀಘ್ರದಲ್ಲೇ ಅಲ್ಲಿಯೂ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.
*441 ಕೋಟಿ ರೂ. ಡಿ.ಪಿ.ಅರ್ ಸಿದ್ಧ:*
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಅನುದಾನ ಖರ್ಚು ಮಾಡಲಾಗುತ್ತಿದೆ. ಪ್ರಮುಖವಾಗಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕ.ಕ. ಭಾಗದ ಆಸ್ಪತ್ರೆಗಳ ಮೇಲ್ದರ್ಜೆಗೇರಿಸುವ ಸಂಬಂಧಪಟ್ಟಂತೆ ನಿರ್ಣಯ ಕೈಗೊಳ್ಳಲಾಗಿದ್ದು, ಇದಕ್ಕಾಗಿ 441 ಕೋಟಿ ರೂ. ವೆಚ್ಚದ ಡಿಪಿಆರ್ ಸಿದ್ಧವಾಗಿದೆ ಎಂದು ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ತಿಳಿಸಿದರು.
ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕೆ.ಕೆ.ಆರ್.ಡಿ.ಬಿ ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಶ್ರೀ ಜಯದೇವ ಹೃದ್ರೋಗ ಹಾಗೂ ಸಂಶೋಧನಾ ಅಸ್ಪತ್ರೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ, ಕಲಬುರಗಿ ಶಾಖಾ ಆಸ್ಪತ್ರೆಯ ಪ್ರಭಾರಿ ಅಧೀಕ್ಷಕ ಡಾ.ವಿರೇಶ ಪಾಟೀಲ, ಸಮನ್ವಯಾಧಿಕಾರಿ ಸಂತೋಷ್ ಉಪಸ್ಥಿತರಿದ್ದರು.
Post a Comment