*371 (ಜೆ) ಕಾಯ್ದೆ ಜಾರಿ ಪರಿಣಾಮ ಪ್ರದೇಶದಲ್ಲಿ ಅಭಿವೃದ್ಧಿಯ ಕ್ರಾಂತಿ*
*-ಪ್ರಿಯಾಂಕ್ ಖರ್ಗೆ*
ಕಲಬುರಗಿ,ಡಿ.20(ಕ.ವಾ) ಸಂವಿಧಾನಕ್ಕೆ ತಿದ್ದುಪಡಿ ತಂದು ಕಲಂ 371ಜೆ ಕಾಯ್ದೆ ಜಾರಿ ಪರಿಣಾಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗಣನೀಯವಾಗಿ ಅಭಿವೃದ್ದಿಯ ಕ್ರಾಂತಿಯಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶುಕ್ರವಾರ ಇಲ್ಲಿನ ನೂತನ ಜಯದೇವ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಂ 371(ಜೆ) ಜಾರಿಗೆ ಬಂದ ಮೇಲೆ ಲಕ್ಷಾಂತರ ಜನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಕ್ಕಿವೆ. ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವು ಲೋಪದೋಷಗಳಿದ್ದು, ಅದನ್ನು ಸರಿಪಡಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದ ಅವರು, ಈ ಭಾಗಕ್ಕೆ ಅನ್ಯಾಯವಾಗಲು ತಾವು ಮತ್ತು ಸಚಿವ ಡಾ.ಶರಣಪ್ರಕಾಶ ಪಾಟೀಲ ಬಿಡುವುದಿಲ್ಲ ಎಂದರು.
2016ರಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿಯೇ ಸ್ಥಾಪನೆಯಾದ ಜಯದೇವ ಆಸ್ಪತ್ರೆಯಲ್ಲಿ ಇದೂವರೆಗೆ ಸುಮಾರು 15 ಲಕ್ಷ ವಿವಿಧ ರೀತಿಯ ಸೇವೆ ಪಡೆದಿದ್ದು, ಹೆಮ್ಮೆಯ ವಿಷಯವಾಗಿದೆ. ಈ ಅಂಕಿ ಸಂಖ್ಯೆಗಳೇ ಪ್ರದೇಶಕ್ಕೆ ಆಸ್ಪತ್ರೆಯ ಅವಶ್ಯಕತೆ ಎಷ್ಟಿತ್ತು ಎಂಬುದನ್ನು ವಿವರಿಸುತ್ತದೆ. ನಮ್ಮ ಸರ್ಕಾರ ಬಡವರ, ಅಭಿವೃದ್ಧಿ ಪರ ಸರ್ಕಾರವಾಗಿದೆ. ನಾಡಿನ ಬಡ ಜನರ ಕಣ್ಣಿರೊರೆಸುವ ಸರ್ಕಾರ ನಮ್ಮದಾಗಿದೆ ಎಂದರು.
ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರ ವಿಶೇಷ ಕಾಳಜಿಯಿಂದ ಜಯದೇವ ಆಸ್ಪತ್ರೆ ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಕಲಬುರಗಿಯನ್ನು ಕಲಬುರಗಿ ಮೆಡಿಕಲ್ ಹಬ್ ಆಗಿ ಪರಿವರ್ತಿಸುವ ನಮ್ಮ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದ ಅವರು, ಕಲಂ 371 (ಜೆ) ಜಾರಿಗೆ ಬಂದು ಒಂದು ದಶಕಗಳು ಸಂದ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಯನ್ನು 371 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಅದು ಸಿಎಂ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಸಚಿವರು ಹೇಳಿದರು.
*ಕ್ಯಾಬಿನೆಟ್ ತೀರ್ಮಾನ ಜಾರಿಗೆ ಸರ್ಕಾರ ಬದ್ದ:*
ಕಲಬುರಗಿಯಲ್ಲಿ ಕಳೆದ ಸೆ.17 ರಂದು ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಪ್ರದೇಶಕ್ಕೆ ಸಂಬmಧಿಸಿದ ಹಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಅವುಗಳನ್ನು ನೂತನ ವರ್ಷಾರಂಭದಿಂದ ಹಂತ-ಹಂತವಾಗಿ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಜಿಲ್ಲೆಗೆ ಅನುದಾನ ತರುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸುತ್ತಾ ಹೇಳಿದರು.
*ತೊಗರಿ ಪರಿಹಾರಕ್ಕೆ ಸಿ.ಎಂ.ಬಳಿ ನಿಯೋಗ:*
ಕಲಬುರಗಿ ಸೇರಿ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯದಿಂದ ತೊಗರಿ ಬೆಳೆ ನಾಶವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ವಿಚಿತ್ರ ರೋಗ ಕಂಡು ಹಿಡಿಯಲು ಈಗಾಗಲೆ ರಾಯಚೂರು ಕೃಷಿ ವಿ.ವಿ. ತಂಡ ಮತ್ತು ಕಾನ್ಪುರದ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಪಲ್ಸಸ್ ರಿಸರ್ಚ್ ಸಂಸ್ಥೆಯ ವಿಜ್ಞಾನಿಗಳ ತಂಡ ಪ್ರತ್ಯೇಕವಾಗಿ ಅಧ್ಯಯನ ಮಾಡಿದೆ. ಅಧ್ಯಯನದ ವರದಿ ಮತ್ತು ಬೆಳೆ ನಾಶದ ನಿಖರ ದತ್ತಾಂಶ ಲಭ್ಯವಾದ ಕೂಡಲೆ ಸಿ.ಎಂ. ಅವರಿಗೆ ಬಳಿಗೆ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ತೆಗೆದುಕೊಂಡು ಹೋಗಿ ರೈತರಿಗೆ ಪರಿಹಾರ ನೀಡಲು ಒತ್ತಾಯಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಇನ್ನು ಬೆಳೆ ವಿಮೆ ಯೋಜನೆಯಡಿ ನೊಂದಾಯಿಸಿದ ರೈತರಿಗೆ 77 ಕೋಟಿ ರೂ. ಮಧ್ಯಂತರ ಪರಿಹಾರ ಬಿಡುಗಡೆಗೆ ಈಗಾಗಲೆ ವಿಮಾ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕ ಎಂ.ವೈ.ಪಾಟೀಲ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ ಸಿ.ಇ.ಓ ಭಂವರ್ ಸಿಂಗ್ ಮೀನಾ, ಡಿ.ಸಿ.ಎಫ್ ಸುಮಿತ್ ಪಾಟೀಲ, ಸಹಾಯಕ ಆಯುಕ್ತೆ ಸಾಹಿತ್ಯ, ಮಹಾನಗರ ಪಾಲಿಕೆ ಪ್ರಭಾರಿ ಆಯುಕ್ತ ಅವಿನಾಶ ಶಿಂಧೆ, ಕೆ.ಕೆ.ಆರ್.ಟಿ.ಸಿ ಎಂ.ಡಿ. ಎಂ.ರಾಚಪ್ಪ, ಕಲಬುರಗಿಯ ಜಯದೇವ ಶಾಖಾ ಆಸ್ಪತ್ರೆಯ ಪ್ರಭಾರಿ ಅಧೀಕ್ಷಕ ಡಾ.ವಿರೇಶ ಪಾಟೀಲ, ಸಮನ್ವಯಾಧಿಕಾರಿ ಸಂತೋಷ್ ಇದ್ದರು.
Post a Comment